ಭೂಮರ
ಮಧ್ಯಪ್ರದೇಶದಲ್ಲಿರುವ ಪ್ರಾಚೀನ ಹಿಂದೂ ದೇವಾಲಯಗಳಿರುವ ಸ್ಥಳಗಳ ಪೈಕಿ ಒಂದು. ಕ್ರಿ.ಶ. ಐದನೆಯ ಶತಮಾನಕ್ಕೆ ಸೇರಿದ ಗುಪ್ತ ಶೈಲಿಯ ಶಿವದೇವಾಲಯವಿಲ್ಲಿದೆ. ಸುಮಾರು 9.5 ಮೀಟರ್ ಅಗಲ ಹಾಗೂ 20.7 ಮೀಟರ್ ಉದ್ದವಿರುವ ಒಂದು ಸಾಮಾನ್ಯ ಶಿಲ್ಪವಿದು. ಮಂದಿರ, ಪೂರ್ವಾಭಿಮುಖವಾಗಿದ್ದು, ಅದರ ಬಹಿದ್ರ್ವಾರ ಆಕರ್ಷಕವಾಗಿದೆ. ಕೆಂಪು ಮರಳುಗಲ್ಲಿನಲ್ಲಿ ಬಿಡಿಸಿರುವ ಕಲ್ಪನಾಸೀಮೆಯ ಲತಾವಿನ್ಯಾಸ, ಲತೆಗಳನ್ನು ಹಿಡಿದು ಮೇಲೇರುತ್ತಿರುವ ಯಕ್ಷಕಿಶೋರರು ಮುಂತಾದುವು ಗುಪ್ತಶೈಲಿಯ ಶಿಲ್ಪಕಲಾ ವೈಭವವನ್ನು ಮೆರೆಯುತ್ತಿವೆ. ಬಾಗಿಲುವಾಡ, ಕಿಟಕಿಗಳು ಹಾಗೂ ಭಿತ್ತಿಪತ್ರಗಳು ಮನಸೂರೆಗೊಳ್ಳುತ್ತವೆ. ಚೌಕಾಕೃತಿಯ ನವರಂಗ ಅದರ ಹಿಂದೆ ಅಂಗಳದ ಮಧ್ಯದಲ್ಲಿ ಚೌಕದ ಗರ್ಭಾಂಕಣ ಇದರ ಸುತ್ತ ಪ್ರದಕ್ಷಿಣಾಪಥವಿರುವುದು ಇಲ್ಲಿಯ ವೈಶಿಷ್ಟ್ಯ. ಮಂದಿರದ ಗೋಪುರ ಉತ್ತರ ನಾಗರ ಶೈಲಿಯಲ್ಲಿ ನಿರ್ಮಿತವಾಗಿದೆ. ಇದೇ ಕಾಲ ಹಾಗು ಶೈಲಿಗೆ ಸೇರಿದ ಎರಡು ದೇವಾಲಯಗಳು ದೇವಘರ್ ಮತ್ತು ಭೀತರ್‍ಗಾಂವ್ ಎಂಬಲ್ಲಿವೆ.
(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ